ಕರುನಾಡು ಫೈನಾನ್ಸ್

ನೇಪಾಳಿ ಕಳ್ಳರಿಂದ ಬೆಂಗಳೂರಿನಲ್ಲಿ ಏರಿದ ಕಳ್ಳತನ ಪ್ರಕರಣಗಳು, ಪೊಲೀಸರಿಗೂ ತಲೆನೋವು.

ಬೆಂಗಳೂರು, ನವೆಂಬರ್ 11: ಇಡೀ ಬೆಂಗಳೂರನ್ನೇ ಬೀಳಿಸಿದ್ದ ಅರಿಹಂತ್ ಜ್ಯುವೆಲ್ಲರ್ಸ್ ಮಾಲೀಕನ ಮನೆ ಕಳ್ಳತನ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವು ತಂದೊಡ್ಡಿದೆ. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ, ನಗದು ದೋಚಿದ ಖದೀಮರು ನೇಪಾಳ ತಲುಪಿದ್ದು, ಇದೀಗ ಆರೋಪಿಗಳ ಪತ್ತೆ ಹಾಗೂ ಕಳವಾದ ಆಭರಣಗಳ ಪತ್ತೆ ಕಾರ್ಯ ಸವಾಲಾಗಿ ಪರಿಣಮಿಸಿದೆ. ಆದರೆ, ಬೆಂಗಳೂರಿನಲ್ಲಿ ಇದೇನು ಮೊದಲ ಪ್ರಕರಣವಲ್ಲ. ಅನೇಕ ವರ್ಷಗಳಿಂದ ಬೆಂಗಳೂರಿನ ಶ್ರೀಮಂತರ ಮನೆಗಳಲ್ಲಿ ನೇಪಾಳಿ ಮೂಲದವರ ಕೈಚಳಕ ಜೋರಾಗಿಯೇ ನಡೆದಿದೆ.

ನೇಪಾಳಿ ಗ್ಯಾಂಗ್ ಕರಾಮತ್ತಿನ ಇತಿಹಾಸ

2021ರಲ್ಲಿ ಡಿ‌‌ಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಆರ್ಮಿ ಆಫೀಸರ್ ಮನೆಯಲ್ಲಿ ಪಕ್ಕದ ಅಪಾರ್ಟ್ಮೆಂಟ್​ನಲ್ಲಿ ಕೆಲಸಕ್ಕಿದ್ದ ನಾಲ್ವರಿಂದ 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
2023ರಲ್ಲಿ ಮಹಾಲಕ್ಷ್ಮಿ ಠಾಣಾ ವ್ಯಾಪ್ತಿಯಲ್ಲಿ ರಾಕ್​ಲೈನ್ ಸಹೋದರನ ಮನೆಯಲ್ಲಿ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸಕ್ಕಿದ್ದ 7 ಜನರಿಂದ 1.53 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
2024ರಲ್ಲಿ ಸಂಜಯ್ ನಗರ ಠಾಣೆ ವ್ಯಾಪ್ತಿಯಲ್ಲಿ ಮಾಜಿ ಮೇಯರ್ ನಾರಾಯಣ ಸ್ವಾಮಿ ಮನೆಯಲ್ಲಿ ಸೆಕ್ಯೂರಿಟಿಯಿಂದಲೇ 1.30 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.
ಕಳೆದ ವಾರ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸಂಪಿಗೆ ಥಿಯೇಟರ್ ಓನರ್ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯಿಂದಲೇ 38 ಲಕ್ಷ ರೂಮ ಮೌಲ್ಯದ ಚಿನ್ನಾಭರಣ, ನಗದು ಕಳವು.
ಈಗ ವಿಜಯನಗರ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆಯಲ್ಲಿ ಕೆಲಸಕ್ಕಿದ್ದ ದಂಪತಿಯಿಂದಲೇ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕಳವು.

ಇವಿಷ್ಟು ಕೆಲವು ಉದಾಹರಣೆಗಳು ಅಷ್ಟೇ. ಆದರೆ ಈ ರೀತಿಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗೆ ಕಳ್ಳತನ, ದರೋಡೆ ಮಾಡಿಕೊಂಡು ಎಸ್ಕೇಪ್ ಆಗುವ ಅನೇಕ ನೇಪಾಳಿ ಗ್ಯಾಂಗ್​ ಅನ್ನು ಪೊಲೀಸರು ನೇಪಾಳ ತಲುಪುವ ಒಳಗೆ ಹೆಡೆಮುರಿ ಕಟ್ಟಿದ್ದಾರೆ. ಆದರೆ ಸಂಜಯ್ ನಗರ ಪ್ರಕರಣದಲ್ಲಿ ಮಾತ್ರ ಆರೋಪಿಗಳು ನೇಪಾಳ ತಲುಪಿದ್ದು, ರಾಜತಾಂತ್ರಿಕ ಸಮಸ್ಯೆಯಿಂದ ಬಂಧನ ಕಷ್ಟವಾಗಿದೆ.

ಇನ್ನು ವಿಜಯನಗರ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆ ಕೇಸ್ ಆರೋಪಿಗಳು ಘಟನೆ ಬೆಳಕಿಗೆ ಬರುವ ಮುನ್ನವೇ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾರೆ. ಆದರೆ, ಬಾರ್ಡರ್ ಮೂಲಕ ಕೆಜಿಗಟ್ಟಲೇ ಚಿನ್ನ ಸಾಗಿಸುವುದು ಕಷ್ಟದ ಕೆಲಸ. ಹೀಗಾಗಿ ಆರೋಪಿಗಳು ಪರ್ಯಾಯ ಮಾರ್ಗವಾಗಿ ನೇಪಾಳ ತಲುಪಿರುವ ಸಾಧ್ಯತೆ ಇದ್ದು, ಈ ಗ್ಯಾಂಗ್​ ಬಂಧನ ಪೊಲೀಸರಿಗೆ ಅತಿದೊಡ್ಡ ಸವಾಲೇ ಸರಿ.

 

Exit mobile version