ಪಾಟ್ನಾ: ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಒಟ್ಟಿಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆಯ ಬಳಿಕ ಆ ಪ್ರದೇಶದಲ್ಲಿ ಶೋಕ ಮಡುಗಟ್ಟಿದೆ. ಇಬ್ಬರು ಸಹೋದರರು ಮತ್ತು ಸೋದರಳಿಯ ಹಾಗೂ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಅದೇ ಕುಟುಂಬದ ವ್ಯಕ್ತಿಯ ಸಾವಿನ ನಂತರ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಸೆಪ್ಟಿಕ್ ಟ್ಯಾಂಕ್‌ನಲ್ಲಿ ಉಸಿರುಗಟ್ಟಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಇದರಲ್ಲಿ ಮೊದಲಿಗೆ ವ್ಯಕ್ತಿಯೊಬ್ಬ ಪೈಪ್ ಅಳವಡಿಸಲು ಮುಂದಾದಾಗ ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಇಬ್ಬರು ಸಹೋದರರು ಮತ್ತು ಅವರ ಸೋದರಳಿಯ ಸಹ ಟ್ಯಾಂಕ್‌ಗೆ ಇಳಿದರು. ಆತನನ್ನು ರಕ್ಷಿಸಲು ಹೋದ ಮೂವರೂ ಒಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಮಾಹಿತಿಯ ಪ್ರಕಾರ, ಸಂಜಯ್ ರಾಮ್ ಎಂಬ ವ್ಯಕ್ತಿ ಶೌಚಾಲಯದ ತೊಟ್ಟಿಗೆ ಪೈಪ್ ಹಾಕಲು ಪ್ರಯತ್ನಿಸುತ್ತಿದ್ದ. ಈ ವೇಳೆ ಸೆಪ್ಟಿಕ್ ಟ್ಯಾಂಕ್‌ನ ಮುಚ್ಚಳ ಒಡೆದಿದೆ. ಮುಚ್ಚಳ ಒಡೆದ ಕಾರಣ ಆತ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಅವರನ್ನು ರಕ್ಷಿಸಲು ನೆರೆಹೊರೆಯಲ್ಲಿ ವಾಸಿಸುವ ಸುಶೀಲ್ ರಾಮ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಅವರಿಬ್ಬರೂ ಹೊರಗೆ ಬರದಿದ್ದಾಗ ಸುಶೀಲ್ ಅವರ ಸಹೋದರ ಸುಧೀರ್ ರಾಮ್ ಮುಂದೆ ಬಂದಿದ್ದು, ಅವರನ್ನು ರಕ್ಷಿಸಲು ಆತ ಕೂಡ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದಿದ್ದಾರೆ. ಇದಾದ ನಂತರ ಅವರ ಸೋದರಳಿಯ ನವಲ್ ರಾಮ್ ಕೂಡ ಕೆಳಗಿಳಿದಿದ್ದಾರೆ.

ಸಂಜಯ್​ನನ್ನು ರಕ್ಷಿಸಲು ಒಬ್ಬೊಬ್ಬರಾಗಿ ಮೂವರೂ ಸೆಪ್ಟಿಕ್ ಟ್ಯಾಂಕ್‌ಗೆ ಇಳಿದು ಸಾವನ್ನಪ್ಪಿದ್ದಾರೆ. ಸೆಪ್ಟಿಕ್ ಟ್ಯಾಂಕ್‌ನಿಂದ ಯಾರೂ ಹೊರಬರದ ಕಾರಣ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಎಲ್ಲರನ್ನೂ ಹೊರಗೆಳೆದು ಆಸ್ಪತ್ರೆಗೆ ಕರೆದೊಯ್ದರು. ನಾಲ್ವರ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.


Discover more from ಕರುನಾಡು ಫೈನಾನ್ಸ್

Subscribe to get the latest posts sent to your email.

Leave a Reply